ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯ: ಹರಿಹರ, ಟಿ.ಶೆಟ್ಟಿಗೇರಿ

ದೇವಾಲಯದ ಬಗ್ಗೆ


ದೇವಿಯ ಐತಿಹ್ಯ: ಸಪ್ತಮಾತ್ರಿಕಿಯರಲ್ಲಿ ಒಬ್ಬಳಾದ ಆದಿಶಕ್ತಿ ಸ್ವರೂಪಿಣಿ ಶ್ರೀ ಚಿಕ್ಕದೇವಮ್ಮ ಚಿಕ್ಕಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ತಂಗಿಯ ಮೂಲಸ್ಥಾನ ಎಚ್.ಡಿ.ಕೋಟೆಯ ಸರಗೂರು ಬಳಿಯ ಚಿಕ್ಕದೇವಿ ಬೆಟ್ಟ. ಅಕ್ಕ ಚಾಮುಂಡಿ ದೇವಿಯಂತೆ ರಾಕ್ಷಸ ಸಂಹಾರಕ್ಕಾಗಿ ಅವಿರ್ಭವಿಸಿದ ಶ್ರೀ ಚಿಕ್ಕಮ್ಮ ದೇವಿಯು ಮೈಸೂರು ಮಹಾರಾಜರ ಆರಾಧ್ಯ ದೈವವಾಗಿದೆ. ಕುದುರೆ ದೇವಿಯ ವಾಹನವಾಗಿದೆ.

ಬೆಟ್ಟದ ತಪ್ಪಲಿನಲ್ಲಿ ಶಾಂತವಾಗಿ ಹರಿಯುವ ಕಪಿಲಾ ನದಿ, ಕಬಿನಿ ಜಲಾಶಯ, ಎಚ್.ಡಿ.ಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ರಮಣೀಯ ಪರಿಸರ ಬೆಟ್ಟದ ಮೇಲಿನಿಂದ ವಿಹಂಗಮ ನೋಟಕ್ಕೆ ಕಣ್ಮನ ಸೆಳೆಯುವ ಆಕರ್ಷಣೀಯ ತಾಣವಾಗಿದೆ.

ಹರಿಹರದ ಹಿನ್ನಲೆ:  ದೇವಸ್ಥಾನದಲ್ಲಿ 2021 ರ ಅಕ್ಟೋಬರ್ ನಲ್ಲಿ ತಾಂಬೂಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿ ತಿಳಿದು ಬಂದಂತೆ, ಸುಮಾರು 300 ರಿಂದ 400 ವರ್ಷಗಳ ಹಿಂದೆ ಹೆಚ್.ಡಿ. ಕೋಟೆಯ ಚಿಕ್ಕದೇವಮ್ಮ ದೇವಿಯನ್ನು ಆರಾಧಿಸುತ್ತಿದ್ದ ಕುಟುಂಬದವರು ಅಲ್ಲಿನ ಬರಗಾಲವನ್ನು ಸಹಿಸಲಾರದೆ ಕೊಡಗಿನೆಡೆಗೆ ವಲಸೆ ಬರುತ್ತಾರೆ. ಹಾಗೆ ಬರುವಾಗ ದೇವಿಯ ತಾಳಿಯನ್ನು ತೆಗೆದುಕೊಂಡು ಬಂದು ಕೊಡಗಿನ  ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದಲ್ಲಿ ನೆಲೆ ನಿಂತು ದೇವಿಯನ್ನು ಆರಾಧಿಸಲು ಆರಂಭಿಸುತ್ತಾರೆ. ಆದ್ದರಿಂದಲೇ ಈ ಚಿಕ್ಕಮ್ಮ ದೇವಿಯನ್ನು ಕೊಡಗಿನಾದ್ಯಾಂತ ಬೆಟ್ಟದ ಚಿಕ್ಕಮ್ಮ, ಬೆಟ್ಟಚಿಕ್ಕಮ್ಮ ಬೆಟ್ಟಚಿಕ್ಕಿ ಎಂದೇ ಜನಜನಿತವಾಗಿದೆ. ಇದೇ ಸಂದರ್ಭ ಚಿಕ್ಕಮ್ಮ ದೇವಿಯು ಹುತ್ತದಿಂದ ಅವಿರ್ಭವಿಸಿದ ನಾಗ ಸ್ವರೂಪಿಣಿಯಾದ್ದರಿಂದ ಇಲ್ಲಿ ದೇವರ ಸರ್ಪ ಇಲ್ಲಿ ಸುತ್ತಾಡುತ್ತಿದೆ ಎಂದು ತಿಳಿದುಬಂದಿದೆ. 

ಶ್ರೀ ಬೆಟ್ಟಚಿಕ್ಕಮ್ಮ ಕೊಡಗಿನ ಭಾಗದ ಭಕ್ತರಿಗೆ ಬೇಡಿದ ವರ ನೀಡುವ ಅದಮ್ಯ ಶಕ್ತಿ ದೇವತೆ, ಮುತ್ತೈದೆ ಭಾಗ್ಯ ಸಂತಾನ ಭಾಗ್ಯ ಕರುಣಿಸುವಂತೆ ಭಕ್ತರು ದೇವಿಯನ್ನು ಪ್ರಾರ್ಥಿಸುತ್ತಾರೆ. ಶ್ರೀ ಲಕ್ಷ್ಮಿ ದೇವಿ, ಶ್ರೀ ಕನ್ನಂಬಾಡಮ್ಮ ಹಾಗೂ ಶ್ರೀ ಭೈರವೇಶ್ವರ ಇಲ್ಲಿನ ಪರಿವಾರ ದೇವತೆಗಳಾಗಿವೆ.

ಪರಿವಾರ ಕುಟುಂಬ: ಅನಾದಿಕಾಲದಿಂದಲೂ ಪರಿವಾರ ಜನಾಂಗದ ಕುಟುಂಬದವರು ವಂಶಪಾರಂಪರ್ಯವಾಗಿ ಶ್ರೀ ದೇವಿಯ ಸೇವೆ(ಅಂದರೆ ಪೂಜೆ, ಉತ್ಸವ)ಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದಾಗ್ಯೂ ಈ ದೇವಿ-ದೇವಸ್ಥಾನವು ಹೊದೂರು ಕೇರಿಗೆ ಸಂಬಂಧಪಟ್ಟಿರುತ್ತದೆ.  ಪ್ರಸ್ತುತ ಲೋಕೇಶ  ಅವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆಯವರಾದ ಶ್ರೀ ವೆಂಕಟಪ್ಪ (ಪುಟ್ಟಪ್ಪ) ಅವರು ನಿರಂತರವಾಗಿ 50 ವರ್ಷಗಳ ಕಾಲ ದೇವಿಗೆ ಸೇವೆ ಸಲ್ಲಿಸಿ 2016ರಲ್ಲಿ ದೈವಾಧೀನರಾಗಿದ್ದಾರೆ.

‌ದಿವಂಗತ. ಶ್ರೀ ವೆಂಕಟಪ್ಪ (ಪುಟ್ಟಪ್ಪ):
ಇವರು ನಿರಂತರವಾಗಿ 50 ವರ್ಷ ಗಳಿಗೂ ಹೆಚ್ಚು ಕಾಲ ( 1964 ರಿಂದ 2015ರವರೆಗೆ )ದೇವಿಯ ಅರ್ಚಕರಾಗಿ ಹಾಗೂ ವಾರ್ಷಿಕ ಉತ್ಸವದಂದು ತಡಂಬು ಸೇವೆಯನ್ನು ಸಲ್ಲಿಸಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ: ಈ ಮೇಲಿನ ಚಿತ್ರದಲ್ಲಿರುವ ಹಂಚಿನ ದೇವಸ್ಥಾನವು ನೂರು ವರ್ಷಗಳಿಗೂ ಹಳೆಯದಾಗಿದ್ದರಿಂದ ದೇವರ ಕುಟುಂಬದವರು ಹಾಗೂ ಊರಿನವರು ಸೇರಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯದಲ್ಲಿ ಶಾಸ್ತ್ರೋಕ್ತವಾಗಿ ತೊಡಗಿಕೊಂಡಿದ್ದಾರೆ. ಈ ನಿಮಿತ್ತ 2021 ರ ಅಕ್ಟೋಬರ್ ನಲ್ಲಿ ತಾಂಬೂಲ ಪ್ರಶ್ನೆ ಹಾಕಲಾಗಿ ದೇವಿಯು 300 ರಿಂದ 400 ವರ್ಷಗಳ ಹಿಂದೆ ಹುತ್ತದಿಂದ ಅವಿರ್ಭವಿಸಿದೆ ಹಾಗೂ ನಾಗ ಸ್ವರೂಪಣೆಯಾದ್ದರಿಂದ ದೇವರ ಸರ್ಪ ಇಲ್ಲಿ ಸುತ್ತಾಡುತ್ತಿದೆ ಎಂದು ತಿಳಿದುಬಂದಿದೆ. 

ಸುಮಾರು 17 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾರ್ಕಳದ ದೇವಾಲಯ ಶಿಲ್ಪಿ ಕಾರ್ಕಳದ ವೇಲುಸ್ವಾಮಿಯವರಿಂದ ಕಲ್ಲಿನ ಕಟ್ಟಡದ ನೂತನ ಗುಡಿಯು ತಲೆಯೆತ್ತಿ ನಿಂತಿದೆ. ಪೌಲಿ ಇಂಟರ್ಲಾಕ್ ಹಾಗೂ ತಡೆಗೋಡೆಯ ನಿರ್ಮಾಣದ ಅಂದಾಜು ವೆಚ್ಚ 30 ಲಕ್ಷ ರೂಪಾಯಿಗಳಿಗೆ ಶ್ರೀ ಬೆಟ್ಟಚಿಕ್ಕಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ(ರಿ) ಯು ಭಕ್ತರಿಂದ ಧನ ಸಹಾಯ ನಿರೀಕ್ಷೆಯಲ್ಲಿದೆ.

ದೇವಿಯ ಪುನರ್‌ ಪ್ರತಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವನ್ನು 2023ರ ಜನವರಿ 25, 26 ಹಾಗೂ 27ನೇ ದಿನಾಂಕದಂದು ನೆರವೇರಿಸಲಾಗುವುದು.

ಪೂಜಾವಿಧಾನಗಳು


ದೇವಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ ಪೂಜೆ, ಮಂಗಳಾರತಿ ನಡೆಯುತ್ತದೆ. ಅಭಿಷೇಕ, ಅರ್ಚನೆ, ಕುಂಕುಮಾರ್ಚನೆ, ಹೂವು, ಹಣ್ಣು-ಕಾಯಿ, ಪಂಚಾಮೃತ ನೈವೇದ್ಯವನ್ನು ದೇವಿಗೆ ಅರ್ಪಿಸಲಾಗುತ್ತದೆ.

ಉತ್ಸವಗಳು

ತುಲಾ ಸಂಕ್ರಮಣ, ನವರಾತ್ರಿ, ಹುತ್ತರಿ,  ಯುಗಾದಿಯಂಥ ವಿಷೇಷ ದಿನಗಳಲ್ಲಿ ವಿಷೇಷ ಪೂಜೆ ಇರುತ್ತದೆ. 

ವಾರ್ಷಿಕ ಉತ್ಸವ: ಕೊಡಗಿನ ಜನತೆಯ ಕಷ್ಟ ಕಾರ್ಪಣ್ಯಗಳನ್ನು ನೀಗಿಸಿ ಅವರ ಇಷ್ಟಾರ್ಥವನ್ನು ಪೂರೈಸುವುದಕ್ಕಾಗಿ ಇಲ್ಲಿನ ಅಧಿದೇವತೆ ಶ್ರೀ ಕಾವೇರಿ ಮಾತೆಯ ಅಣತಿಯಂತೆ ನೆಲೆ ನಿಂತ ಕಾರಣದಿಂದ ಶ್ರೀ ಬೆಟ್ಟಚಿಕ್ಕಮ್ಮ ದೇವರ ಉತ್ಸವವನ್ನು ಪ್ರತಿ ವರ್ಷವೂ ತುಲಾ ಸಂಕ್ರಮಣದಲ್ಲಿ ದೇವರ ಕುಟುಂಬದವರು ಮತ್ತು ಊರಿನವರು ಕಟ್ಟುನಿಂತು, ನಂತರದ 15 ದಿನಗಳಲ್ಲಿ ಅಂದರೆ ನವೆಂಬರ್ ತಿಂಗಳ ಮೊದಲ ಮಂಗಳವಾರದಂದು ಸಂಜೆ ದೇವರ ಅವಭ್ರತ ಸ್ನಾನ, ನೃತ್ಯ ಪ್ರದಕ್ಷಿಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತದೆ.(ಅದಕ್ಕೆ ಹಿಂದಿನ ಶುಕ್ರವಾರದಿಂದ ಪ್ರತೀ ದಿನ ಸಂಜೆ ದೇವಿಗೆ ಪೂಜೆ ಸಲ್ಲುತ್ತದೆ. ಭಕ್ತಾದಿಗಳು ವಿವಿಧ ಬಗೆಯ ನೈವೇದ್ಯಗಳನ್ನು ದೇವಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ.) ಜಾತ್ರೆಯ ಮರುದಿನ ಬುಧವಾರ ಬೆಳಿಗ್ಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಮಾರನೇ ಶುಕ್ರವಾರ ಊರಿನವರೆಲ್ಲ ಸೇರಿ ಶ್ರೀ ಕನ್ನಂಬಾಡಮ್ಮ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಜಾತ್ರೆ ಕಳೆದ ಮುಂದಿನ ಮಂಗಳವಾರ ಸಹ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಬಿಳುಪು ಪೂಜೆ ದೇವಿಗೆ ಅರ್ಪಿಸುವ ಅಪರೂಪದ ವಿಷೇಷ ಪೂಜೆಯಾಗಿದೆ.

ಪೂಜಾ ಸಮಯ


ಮಂಗಳವಾರ ಹಾಗೂ ಶುಕ್ರವಾರ ಬೆಳಿಗ್ಗೆ: 6 ಗಂಟೆಯಿಂದ 10 ಗಂಟೆಯವರಗೆ.

ಅರ್ಚಕರನ್ನು ಸಂಪರ್ಕಿಸಿ ಯಾವುದೇ ದಿನ ದೇವರ ದರ್ಶನವನ್ನು ಪಡೆಯಬಹುದು.

ವ್ಯವಸ್ಥಾಪನ ಸಮಿತಿ


ಅಧ್ಯಕ್ಷರು: 
ಮುಕ್ಕಾಟಿರ .ಪಿ. ವೇಣು, 
(ನಿವೃತ್ತ ಫ್ರೌಡ ಶಾಲಾ ಮುಖ್ಯೋಪಾದ್ಯಾಯರು)
ಮೊ: 9945234524

ಕಾರ್ಯದರ್ಶಿ:
ಪರಿವಾರ ಎಸ್.‌ ನಟೇಶ
ಮೊ: 9632898424

ಸಹ ಕಾರ್ಯದರ್ಶಿ:
ಮುಕ್ಕಾಟಿರ ಬಿ. ಪೂಮಣಿ
ಮೊ: 9741372586

ಖಜಾಂಚಿ: 
ಮುಕ್ಕಾಟಿರ ಕೆ. ಕರುಂಬಯ್ಯ
ಮೊ: 944832058

ಅರ್ಚಕರು: 
ಲೋಕೇಶ್ ಪಿ.ವಿ.
ಮೊ: 9480787874
 
ಗುರು ಹಿರಿಯರು

ಕುಟುಂಬಸ್ಥರು 

ಗ್ರಾಮಸ್ಥರು

ದೇಣಿಗೆ


ಅಕೌಂಟ್‌ ಡಿಟೈಲ್ಸ್:‌

ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯ ಜೀರ್ಣೋದ್ದಾರ ಸಮಿತಿ(ರಿ)

ಕೆನರಾ ಬ್ಯಾಂಕ್ ಗೋಣಿಕೊಪ್ಪಲು

ಅಕೌಂಟ್ ನಂಬರ್ 110080317327

IFSE CODE: CNRB0000686

ಸಂಪರ್ಕ


ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯ, 
ಹರಿಹರ, ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ,
ಕೊಡಗು. 

ಅರ್ಚಕರು: 

ಲೋಕೇಶ್ ಪಿ.ವಿ.

ಮೊ: 9480787874, 6364687874


Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.